ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಬೃಹತ್ ಸರೋವರವಿರುವ ನಗರವೂ ಇಲ್ಲ. ಆದರೆ ಇದು ಅಸಂಖ್ಯಾತ ಸಣ್ಣ, ದೊಡ್ಡ ಕೆರೆಗಳಿದ್ದ ನಗರ. ಬೆಂಗಳೂರಿನ ದಾಹವನ್ನು ಸದಾ ಪರಿಹರಿಸುತ್ತಿದ್ದದ್ದು ಕೆರೆಗಳೇ. ಆಧುನಿಕವಾಗುತ್ತಾ ಹೋದ ಬೆಂಗಳೂರು ಕೆರೆಗಳನ್ನೆಲ್ಲಾ ನುಂಗಿತು. ಅದರೊಂದಿಗೆ ಬೆಂಗಳೂರಿನ ನೀರಿನ ಸಮಸ್ಯೆ ಹೆಚ್ಚು ಸಂಕೀರ್ಣವಾಯಿತು. ಕಾವೇರಿಯಿಂದ ಇನ್ನಷ್ಟು ನೀರು ತರಲು ಸಾಧ್ಯವಿಲ್ಲದ ಸ್ಥಿತಿ ಇದೆ. ಬದುಕಿರುವ ಕೆರಗಳಲ್ಲೀಗ ನೊರೆ-ಹಾವಳಿ. ಬೆಂಗಳೂರಿನ ನೀರಿನ ಸಮಸ್ಯೆಯ ಮುನ್ನೆಲೆಯಲ್ಲಿ ಬಯಲು ಸೀಮೆಯ ದಾಹದ ಕಾರಣಗಳನ್ನು ಶೋಧಿಸುವ ಪ್ರಯತ್ನವೊಂದನ್ನು ಇಬ್ಬರು ಕನ್ನಡಿಗ ಭೂ ವಿಜ್ಞಾನಿಗಳು ನಡೆಸಿದ್ದಾರೆ. ‘ಸಂಚಿ’ ಅವರ ಮಾತುಗಳನ್ನು ದಾಖಲಿಸಿ ನಿಮ್ಮ ಮುಂದಿಡುತ್ತಿದೆ.
ನಾಗೇಶ್ ಹೆಗಡೆ ಭೂ ವಿಜ್ಞಾನವನ್ನು ಅಧ್ಯಯನ ಮಾಡಿದವರು. ಆದರೆ ಅವರ ಆಸಕ್ತಿ ಮತ್ತು ಕೆಲಸದ ಕ್ಷೇತ್ರ ಅದರಾಚೆಗೂ ವಿಸ್ತರಿಸಿಕೊಂಡಿದೆ. ಅಂಕಣ ಬರೆವಣಿಗೆಯಿಂದ ಪರಿಸರ ಹೋರಾಟದ ತನಕ ಅವರ ಕಾರ್ಯಕ್ಷೇತ್ರವಿದೆ. ಟಿ.ಆರ್.ಅನಂತರಾಮು ಭೂ ವಿಜ್ಞಾನವನ್ನು ಅಧ್ಯಯನ ಮಾಡಿ ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಆದರೆ ನಿವೃತ್ತಿಯ ನಂತರವೂ ವಿಜ್ಞಾನ ಬರೆವಣಿಗೆಯ ತಮ್ಮ ಪ್ರವೃತ್ತಿಯಲ್ಲಿ ಹೆಚ್ಚಿನ ಮಟ್ಟಿಗೆ ತೊಡಗಿಸಿಕೊಂಡವರು. ಈ ಇಬ್ಬರೂ ತಜ್ಞರು ಬೆಂಗಳೂರಿನ ಜಲ ಮೂಲದ ಸಮಸ್ಯೆಯನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುತ್ತಲೇ ಪರಿಹಾರಕ್ಕೆ ಅಗತ್ಯವಿರುವ ಸುಸ್ಥಿರ ಮಾರ್ಗಗಳಲ್ಲಿ ಒಂದಾಗುತ್ತಾರೆ.
ಸಂಚಿ ಫೌಂಡೇಶನ್ ಪ್ರಸ್ತುತ ಪಡಿಸುತ್ತಿರುವ ‘ಜ್ಞಾನ ಸರಣಿ’ ಉಪನ್ಯಾಸಗಳಲ್ಲಿ ಇದು ಮೂರನೆಯದ್ದು. ಸಂಚಿ ಫೌಂಡೇಶನ್ ಪಾರಂಪರಿಕ ಮತ್ತು ಸಮಕಾಲೀನ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ಞಾನ ಸಂಪತ್ತಿನ ದೃಶ್ಯ ಮತ್ತು ಶ್ರಾವ್ಯ ದಾಖಲೀಕರಣವನ್ನು ಲಾಭಾಪೇಕ್ಷೆಯಿಲ್ಲದೆ ಮಾಡುತ್ತಿದೆ.
0 Comments