Malati Madhava | ಮಾಲತೀ ಮಾಧವ

`ಮಾಲತೀಮಾಧವ’ ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು — ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ — ಅಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ — ಮಾಧವನ ಗೆಳೆಯ ಮಕರಂದ ಮತ್ತು ಮಾಲತಿಯ ಗೆಳತಿ ಮದಯಂತಿಕೆಯರದ್ದು ಒಂದು ಜೋಡಿ; ಮಾಧವನ ಸೇವಕ ಕಲಹಂಸ ಮತ್ತು ಬೌದ್ಧವಿಹಾರದ ದಾಸಿ ಮಂದಾರಿಕೆಯದ್ದು ಇನ್ನೊಂದು ಜೋಡಿ. ಮಾಲತೀಮಾಧವರ ವಿವಾಹಕ್ಕೆ ವಿಘ್ನ ಸೃಷ್ಟಿಸಲಿಕ್ಕೆ ನಾಟಕವು ರಾಜಕಾರಣದ ಒಂದು ಎಳೆಯನ್ನು ತರುತ್ತದೆ — ಪದ್ಮಾವತಿ ನಗರದ ರಾಜನು ಮಂತ್ರಿಯಾಗಿರುವ ಮಾಲತಿಯ ತಂದೆಗೆ ಆಕೆಯನ್ನು ತನ್ನ ಗೆಳೆಯ ನಂದನನಿಗೇ ಮದುವೆ ಮಾಡಿಕೊಡು ಎಂದು ಆಜ್ಞೆ ಮಾಡುತ್ತಾನೆ. ಇದರಿಂದ ಹತಾಶನಾದ ಮಾಧವನು ನಾಗರಿಕ ಜಗತ್ತನ್ನೇ ತೊರೆದು ಸ್ಮಶಾನವಾಸಿಯಾಗುವುದು, ಅಲ್ಲಿ ಕಾಪಾಲಿಕರಿಂದ ನರಬಲಿಗಾಗಿ ಮಾಲತಿಯ ಅಪಹರಣವಾಗುತ್ತಿರುವುದನ್ನು ಕಂಡು ಆಕೆಯನ್ನು ಕಾಪಾಡುವುದು, ಆಮೇಲೆ ಮತ್ತೆ ಮಾಲತಿಯ ಅಪಹರಣವಾಗುವುದು, ಮತ್ತೊಮ್ಮೆ ಮಾಧವನು ವಿರಹದಿಂದ ಕಾಡುಮೇಡು ಅಲೆಯುವುದು ಮತ್ತು ಅಂತಿಮವಾಗಿ ಸೌದಾಮಿನಿಯೆಂಬ ತಂತ್ರಸಾಧಕಿಯ ನೆರವಿನಿಂದ ಎಲ್ಲರ ಸಮಾಗಮ ನಡೆಯುವುದು — ಇದು ಈ ಕಥನವು ಸಾಗುವ ದಾರಿ. ಇಂಥ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಈ ನಾಟಕವು ಕಾಮಂದಕಿಯೆಂಬ ಬೌದ್ಧ ಸನ್ಯಾಸಿನಿಯನ್ನೂ ಅವಳ ಶಿಷ್ಯಂದಿರನ್ನೂ ಬಳಸಿಕೊಳ್ಳುತ್ತದೆ. ಸಂಸಾರವನ್ನು ತೊರೆದು ವೈರಾಗ್ಯದತ್ತ ಮುಖಮಾಡಿರುವ ಅವರೇ, ಇಲ್ಲಿ ಸಂಬಂಧಗಳನ್ನು ಕಟ್ಟುವ ಸೂತ್ರಧಾರರಾಗುತ್ತಾರೆ — ಆಗಬಾರದ ಮದುವೆಗಳನ್ನು ನಾನಾ ಬಗೆಯ ನಾಟಕೀಯ ಉಪಾಯಗಳಿಂದ ತಪ್ಪಿಸಿ, ಆಗಬೇಕಾದ ಮದುವೆಗಳು ತಂತಾನೇ ಆಗುವಂತೆ ಮಾಡುವ ದೌತ್ಯದ ಉದ್ಯೋಗವನ್ನು ಇವರು ಕೈಗೊಳ್ಳುತ್ತ ಹೋಗುತ್ತಾರೆ.

ಇಡಿಯಾಗಿ ಮಾಡಿದರೆ ಆರು ಗಂಟೆಗಳಿಗೂ ಮಿಕ್ಕು ನಡೆಯಬಹುದಾದ ಈ ನಾಟಕದಲ್ಲಿ ಉದ್ಯಾನ-ಕಾಡು-ಶ್ಮಶಾನ ಇತ್ಯಾದಿ ಆವರಣಗಳ ವಿಸ್ತಾರವರ್ಣನೆಗಳು ಬರುತ್ತವೆ; ಸಮಾಗಮ ಮತ್ತು ವಿರಹದ ಅವಸ್ಥೆಗಳನ್ನು ಎಳೆಎಳೆಯಾಗಿ ಚಿತ್ರಿಸುವ ದೃಶ್ಯಾವಳಿಗಳು ಬರುತ್ತವೆ — ಹೀಗೆ, ಸಾಂಪ್ರದಾಯಿಕ ಮಹಾಕಾವ್ಯದ ಬಂಧದಲ್ಲಿ ಭವಭೂತಿಯು ಈ ಕೃತಿಯನ್ನು ಕಟ್ಟಿದ್ದಾನೆ. ಅಂಥ ಕಾವ್ಯಗಳಂತೆ ಈ ನಾಟಕವೂ ಕೂಡ ಭವಜಗತ್ತಿನ ಸಾಮಾಜಿಕ-ಮನೋವೈಜ್ಞಾನಿಕ ಸಂಘರ್ಷಗಳತ್ತ ಅಷ್ಟೇನೂ ಗಮನ ಹರಿಸುವುದಿಲ್ಲ; ಬದಲು, ಪಾತ್ರ-ಸನ್ನಿವೇಶ-ಕಥನಗಳ ಭಾವಜಗತ್ತನ್ನು ಕೇಂದ್ರವಾಗಿಟ್ಟುಕೊಂಡ ಪ್ರತಿಲೋಕವೊಂದನ್ನು ಸೃಷ್ಟಿಸುತ್ತದೆ. ಹಾಗಾಗಿ, ಸರಳ ಪ್ರೇಮಕಥೆಯಂತೆ ಕಾಣುವ ಈ ಪ್ರತಿಲೋಕದೊಳಗೆ ಬಿಡಿಯಾದ ಹೆಣ್ಣು-ಗಂಡು ತತ್ತ್ವಗಳು ಇಡಿಯಾಗುತ್ತ ಸಾಗುವ ವಿಶಾಲ ಪ್ರಕ್ರಿಯೆ ಅನಾವರಣಗೊಳ್ಳುತ್ತ ಹೋಗುತ್ತದೆ; ಮತ್ತು ಆ ಮೂಲಕ, ನಮ್ಮ ಸಾಂಸ್ಕೃತಿಕ ಪ್ರಜ್ಞೆಯ ಆಳದಲ್ಲಿ ಉಳಿದುಕೊಂಡಿರುವ ಕಾವ್ಯ-ಕಲಾಪ್ರಕಾರಗಳ ಸ್ಮೃತಿಯೊಂದನ್ನು ಈ ನಾಟಕವು ಉದ್ದೀಪಿಸುತ್ತ ರಸಾಸ್ವಾದದತ್ತ ನಮ್ಮನ್ನು ಕರೆದೊಯ್ಯುತ್ತದೆ.

ಅಂಥ ರಸನಿಷ್ಠ ಕಾವ್ಯಕೃತಿಯೊಂದರ ಸಮಕಾಲೀನ ರಂಗಾನುಸಂಧಾನವೇ ಪ್ರಸ್ತುತ ಪ್ರಯೋಗ. ಅಂಥದೇ ಪ್ರಯತ್ನದಲ್ಲಿ ತೊಡಗಿರುವ ಪ್ರಸ್ತುತ ಅನುವಾದವು ಮೂಲವನ್ನು ಗಣನೀಯವಾಗಿ ಸಂಕ್ಷೇಪಿಸಿದೆ; ಅಷ್ಟಿಷ್ಟು ರೂಪಾಂತರವನ್ನೂ ಮಾಡಿಕೊಂಡಿದೆ. ಹಾಗೂ ರಂಗಪ್ರಸ್ತುತಿಯಲ್ಲಿ, ಇದುವರೆಗೂ ಸಾಧಾರಣವಾಗಿ ಸಂಸ್ಕೃತ ನಾಟಕಗಳನ್ನು ಮಾಡುತ್ತ ಬಂದಿರುವ ಸಿದ್ಧಮಾದರಿಗಳನ್ನು ಬಿಟ್ಟು ಸಮ್ಮಿಶ್ರಗುಣದ ಹೊಸ ರಂಗರೂಪವೊಂದರ ಹುಡುಕಾಟಕ್ಕೂ ತೊಡಗಿಕೊಂಡಿದೆ.

Malati Madhava
A Play by Ninasam 2016
Original: Bhavabhuti
Translation and Direction: Akshara K V
Music: Bhargava K N, Vidya Hegde, Akshara K V

0 Comments

Submit a Comment

Your email address will not be published. Required fields are marked *

Related Articles

Related

ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆ – An act of letting go

https://youtu.be/47P9qJIAyR0?si=ULPoxVJgEj2HR2iS ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆಆ್ಯನ್ ಆ್ಯಕ್ಟ್ ಆಫ್ ಲೆಟ್ಟಿಂಗ್ ಗೋಮಾರ್ಗದರ್ಶನ: ಗಣೇಶ್ ಕಟಾರ A play by Students of Ninasam Theatre Institute 2021-22Contemporary Dance...

ಹುಲಿಯ ಹೆಂಗರುಳು | Huliya Hengarulu

https://youtu.be/yt3amkmqFXY?si=ECAKakREdEo4wLAL ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೧-೨೨ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಹುಲಿಯ ಹೆಂಗರುಳುವಿನ್ಯಾಸ ಮತ್ತು ನಿರ್ದೇಶನ: ಜಗದೀಶ ತಿಪಟೂರು A play by Students of Ninasam Theatre Institute 2021-22Huliya HengaruluDesign and Direction: Jagadish...

ತಾಳಮದ್ದಳೆ – ಶೂರ್ಪಣಖಿ-ಖರಾಸುರ | Taalamaddale – Shurpanaki-Kharasura

https://youtu.be/oPh8_kdaaPU?si=2aSvLcGpqIAedSqA ನೀನಾಸಮ್ ಕಾರ್ಯಕ್ರಮತಾಳಮದ್ದಳೆಪ್ರಸಂಗ: ಶೂರ್ಪಣಖಿ-ಖರಾಸುರಹಿಮ್ಮೇಳ: ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್, ಶ್ರೀ ಕೆ. ರಾಮಮೂರ್ತಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಶ್ರೀ ಉಮಾಕಾಂತ ಭಟ್ಟ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶ್ರೀ...