ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ (ಎಂಜಿಎಂ ಕಾಲೇಜು, ಉಡುಪಿ). ಇವರಿಂದ ಶುದ್ಧರೂಪದ ಯಕ್ಷವ್ಯಾಕರಣವನ್ನೇ ರಸಾತ್ಮಕವಾಗಿ ಮಂಗಳೂರಿನ ಸಾರ್ವಜನಿಕರಿಗೆ ಉಣಬಡಿಸಬೇಕೆಂದೂ ಆ ಪ್ರದರ್ಶನ ಆ ಕಾಲಘಟ್ಟದ ಅತ್ಯುತ್ತಮ ಪ್ರಯೋಗವೆಂದು ದಾಖಲೀಕರಣಕ್ಕೊಳಪಡಿಸಬೇಕೆಂದೂ ಸಂಘಟಕ ತ್ರಯರಾದ ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅಶೋಕವರ್ಧನ (ಪುಸ್ತಕ ವ್ಯಾಪಾರಿ) ಮತ್ತು ಅಭಯಸಿಂಹ (ಸಿನಿಮಾ ನಿರ್ದೇಶಕ) ನಿರ್ಧರಿಸಿದ್ದರ ಫಲ ಈ ಪೂರ್ವರಂಗ ಹಾಗೂ ಯಕ್ಷೋತ್ತಮರ ಕಾಳಗ. ಇದನ್ನು ಅಷ್ಟೇ ನಿರ್ಮಮವಾಗಿ ಒಡ್ಡಿಸಿಕೊಂಡು ಯಕ್ಷಗಾನ ಕೇಂದ್ರವನ್ನು ಚತುರ್ಥ ಭಾಗೀದಾರ ಎಂದು ಗುರುತಿಸಿದರೆ ತಪ್ಪಾಗಲಾರದು.