ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ...